ಚಾಲ್ತಿ ಠೇವಣಿ -
ಠೇವಣಿದಾರ ಕೇಳಿದ ಕೂಡಲೆ ಅವನಿಗೆ ವಾಪಸು ಕೊಡತಕ್ಕದ್ದಂಬ ಷರತ್ತಿಗೆ ಒಳಪಟ್ಟು ಅವನಿಂದ ಬ್ಯಾಂಕು ಸ್ವೀಕರಿಸಿದ ಹಣದ ಠೇವಣಿ (ಕರೆಂಟ್ ಡಿಪಾಸಿಟ್). ಬ್ಯಾಂಕಿನಲ್ಲಿ ಈ ಬಗೆಯ ಠೇವಣಿ ಇಡುವವನೇ ಕಾನೂನು ರೀತ್ಯ ಬ್ಯಾಂಕಿನ ಗ್ರಾಹಕ. ಒಂದು ಸಂಸ್ಥೆಯನ್ನು ವಾಣಿಜ್ಯ ಬ್ಯಾಂಕು ಎಂದು ಕರೆಯಬೇಕಾದರೆ ಈ ಬಗೆಯ ಠೇವಣಿಯನ್ನು ಸ್ವೀಕರಿಸುವುದು ಆ ಸಂಸ್ಥೆಯ ನಿತ್ಯ ವ್ಯವಹಾರದ ಒಂದು ಭಾಗವಾಗಿರಬೇಕು. ಗ್ರಾಹಕ ಇಟ್ಟ ಠೇವಣಿ ಹಣದಲ್ಲಿ ಎಷ್ಟನ್ನಾದರೂ ಎಂದಾದರೂ ಆತ ಡ್ರಾ ಮಾಡಲು ಸಾಮಾನ್ಯವಾಗಿ ನಿರ್ಬಂಧ ಇರುವುದಿಲ್ಲ. ಇದಕ್ಕಾಗಿ ಅವನು ಪೂರ್ವಭಾವಿ ತಿಳಿವಳಿಕೆಯನ್ನು ಬ್ಯಾಂಕಿಗೆ ನೀಡುವ ಅಗತ್ಯವಿಲ್ಲ. ಗ್ರಾಹಕನ ಲೆಕ್ಕದಲ್ಲಿ ಇರುವ ಸಿಲ್ಕಿನ ಮೊಬಲಗಿಗೆ ಒಳಪಟ್ಟು ಗ್ರಾಹಕ ನೀಡುವ ಚೆಕ್ಕುಗಳನ್ನು ಬ್ಯಾಂಕು ಸಾಮಾನ್ಯವಾಗಿ ಆದರಿಸಲೇ ಬೇಕು. ಚಾಲ್ತಿ ಠೇವಣಿ ಲೆಕ್ಕ ಒಂದು ಬಗೆಯ ಧಾರಾವಾಹಿ ಲೆಕ್ಕ. ಅದಕ್ಕೆ ಗ್ರಾಹಕ ಸಾಮಾನ್ಯವಾಗಿ ಹಣ ತುಂಬುತ್ತಿರುತ್ತಾನೆ; ಅದರಿಂದ ಹಣ ಸೆಳೆದು ಕೊಳ್ಳುತ್ತಿರುತ್ತಾನೆ. ಚಾಲ್ತಿ ಠೇವಣಿಯ ಮೇಲೆ ಬಡ್ಡಿ ಕೊಡುವುದಿಲ್ಲ;  ಚಾಲ್ತಿ ಠೇವಣಿದಾರ ತನ್ನ ಲೆಕ್ಕದಲ್ಲಿ ನಿಗದಿಯಾದ ಕನಿಷ್ಠ ಸಿಲ್ಕು ಇಟ್ಟಿರಲೇಬೇಕೆಂಬ ನಿಯಮವೂ ಇರುವುದುಂಟು. ಈ ಕನಿಷ್ಠ ಶಿಲ್ಕಿನ ನಿಯಮ ಎಲ್ಲಾ ಬ್ಯಾಂಕುಗಳಲ್ಲಿ ಸಮನಾಗಿರುವುದಿಲ್ಲ. ವಿವಿಧ ಬ್ಯಾಂಕುಗಳಲ್ಲಿ ಬೇರೆ ಬೇರೆ ಕನಿಷ್ಠ ಶಿಲ್ಕಿನ ನಿಯಮವಿರುತ್ತದೆ. ಚಾಲ್ತಿ ಠೇವಣಿ ಲೆಕ್ಕ ಸಾಮಾನ್ಯವಾಗಿ ಇರುವುದೇ ಉದ್ಯಮಿಗಳ ಅನುಕೂಲಕ್ಕೆ.  ಈ  ಚಾಲ್ತಿ ಖಾತೆಯನ್ನು  ಏಕ ವ್ಯಕ್ತಿ, ಜಂಟಿ ವ್ಯಕ್ತಿಗಳು, ಏಕ ಸ್ವಾಮಿತ್ವದಾತ ಸಂಸ್ಥೆ. ಪಾಲುದಾರಿಕೆ ಸಂಸ್ಥೆ, ಕೂಡು ಬಂಡವಾಳ ಸಂಸ್ಥೆ (ಕಂಪನಿ), ಸಹಕಾರಿ ಸಂಘಗಳು, ವಿಶ್ವಸ್ಥ (ನ್ಯಾಸ)(ಟ್ರಸ್ಟ್) ಮಂಡಳಿಗಳು, ವ್ಯಾಪಾರೇತರ ಸಂಘ, ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಪ್ರಾರಂಭಿಸಬಹುದು. ಅಧಿಕ ಸಂಖ್ಯೆಯಲ್ಲಿ ವಹಿವಾಟು ಇರುವವರಿಗೆ ಇದು ಬಲು ಸೂಕ್ತವಾದ ಖಾತೆ. ಹಣ ಪಾವತಿ ಹಾಗು ಹಣ ಸಂದಾಯ ವಹಿವಾಟಿಗೆ ಯಾವ ಮಿತಿಯೂ ಇಲ್ಲ. ಆದರೆ ವರ್ಷಕ್ಕೊಮ್ಮೆ ಬ್ಯಾಂಕು ಈಖಾತೆದಾರರಿಗೆ ಸೇವಾಶುಲ್ಕವನ್ನು ವಿಧಿಸುವುದುಂಟು.  ವರ್ಷವಿಡೀ ಅಧಿಕ ಮೊತ್ತದ ಶಿಲ್ಕನ್ನು ಇಟ್ಟಿರುವ ಖಾತೆಗಳಿಗೆ ಸೇವಾ ಶುಲ್ಕದ ವಿನಾಯಿತಿಯೊಂದಿಗೆ ಇತರ ಕೆಲವು ಸೌಲಭ್ಯಗಳನ್ನು ನೀಡಿ ಈ ರೀತಿಯ ಉಳಿಕೆಯನ್ನು ಪ್ರೋತ್ಸಾಹಿಸುತ್ತದೆ. ಇದರಲ್ಲಿನ ಉತ್ತಮವಾದ ಹೆಚ್ಚಿ ವಹಿವಾಟುಗಳು ಮೀರೆಳೆತ ಸಾಲ ಸೌಲಭ್ಯಕ್ಕೆ ಒಂದು ಉತ್ತಮ ಧನಾತ್ಮಕ ಅಂಶವಾಗುತ್ತದೆ.  

ಚಾಲ್ತಿ ಖಾತೆಯನ್ನು ಬ್ಯಾಂಕಿನಲ್ಲಿ ತೆರೆಯಲಿಚ್ಚಿಸುವವನು ಬ್ಯಾಂಕಿನ ಗ್ರಾಹಕರಲ್ಲೊಬ್ಬನಿಂದ ಅಥವಾ ಬ್ಯಾಂಕಿಗೆ ಪರಿಚಯಸ್ಥನಾದವನೊಬ್ಬನಿಂದ ಪರಿಚಯಪತ್ರ ತರಬೇಕು. ಪರಿಚಯ ಪತ್ರ ನೀಡುವವನು ಉಳಿತಾಯ ಖಾತೆಯ ಗ್ರಾಹಕನಾಗಿರಬಾರದು. ಅವನು ಚಾಲ್ತಿ ಖಾತೆಯನ್ನು ಹೊಂದಿರುವನಾಗಿರಲೇ ಬೇಕು. ಅಥವಾ ಬ್ಯಾಂಕಿಗೆ ಸಮ್ಮತಿಯಾಗುವಂಥ ವ್ಯಕ್ತಿಯಾಗಿರಬಹುದು. ಕೆಲವು ವಿಶೇಷ ಸಂದರ್ಭಗಳಲ್ಲಿ ಬ್ಯಾಂಕಿನ ಪ್ರಬಂಧಕರೇ ಪರಿಚಯ ಮಾಡುತ್ತಾರೆ. ಅರ್ಜಿದಾರ ತನ್ನ ಹೆಸರು. ವಿಳಾಸ, ವೃತ್ತಿ ಮುಂತಾದವನ್ನು ನೀಡಿ ಅರ್ಜಿ ಕೊಡಬೇಕು. ತನ್ನ ಮಾದರಿ ಸಹಿಯನ್ನೂ ನೀಡಬೇಕು. ಅವನ ಹೆಸರಿನಲ್ಲಿ ಖಾತೆ ತೆರೆಯಲು ಬ್ಯಾಂಕಿಗೆ ಅಭ್ಯಂತರವಿಲ್ಲದಿದ್ದರೆ ಬ್ಯಾಂಕು ಅವನಿಂದ ಪ್ರಾರಂಭಿಕ ಠೇವಣ(ಇನಿಷಿಯಲ್ ಡಿಪಾಸಿಟ್) ಸ್ವೀಕರಿಸಿ ಚಾಲ್ತಿ ಠೇವಣಿ ಖಾತೆ ತೆರೆಯುತ್ತದೆ. ಖಾತೆದಾರನಿಗೆ ಚೆಕ್ ಪುಸ್ತಕ, ಜಮಾ ಮಾಡಲು ಚರನ್ ಪುಸ್ತಕ ಮತ್ತು ಪಾಸ್ ಪುಸ್ತಕ ಇವನ್ನೂ ಕೊಡಲಾಗುತ್ತದೆ. ಪಾಲುದಾರಿಕೆ ಸಂಸ್ಥೆ ಅಥವಾ ಕಂಪನಿಯ ಹೆಸರಿನಲ್ಲಿ ಖಾತೆ ತೆರೆಯಬೇದಾದರೆ ಅದರ ಪರವಾಗಿ ವಹಿವಾಟು ನಡೆಸುವ ಪಾಲುದಾರ ಅಥವಾ ಅಧಿಕಾರಿಯ ಮಾದರಿ ಸಹಿ ಪಡೆಯುವುದು ಅವಶ್ಯ. ಪಾಲುದಾರಿಕೆಯ ಹೆಸರಿನಲ್ಲಿ ಲೆಕ್ಕ ತೆರೆಯಬೇಕಾದರೆ ಪಾಲುದಾರಿಕೆ ಒಪ್ಪಂದದ ವಿಧಿಗಳನ್ನು ನೋಡಬೇಕಾಗಬಹುದು. ಕಂಪನಿಯ ಲೆಕ್ಕ ತೆರೆಯಬೇಕಾದಾಗ ಕಂಪನಿಯ ಷರತ್ತುಗಳು ಮತ್ತು ಸಂಘದ ವಿಧಿಗಳು, ಕಂಪನಿಯ ಹಣಕಾಸಿನ ಸ್ಥಿತಿ ಮುಂತಾದ ವಿವರಗಳನ್ನು ಪಡೆಯಲಾಗುತ್ತದೆ. ಈ ಖಾತೆ ತೆರೆಯುವ ಬಗ್ಗೆ ಮತ್ತು ಇದರ ವಹಿವಾಟು ಯಾರು ನಡೆಸುವರೆಂಬ ಬಗ್ಗೆ ಕಂಪನಿಯ ನಿರ್ದೇಶಕರ ಮಂಡಲಿಯಲ್ಲಿ ಸ್ವೀಕೃತವಾದ ಠರಾವು ನಿರ್ಣಯದ ಪ್ರತಿಯನ್ನೂ ಬ್ಯಾಂಕು ಪಡೆಯುತ್ತದೆ.  ಇದಕ್ಕೆ ಎಲ್ಲ ಪಾಲುದಾರರು ಅಥವಾ ಅಧಿಕೃತ ಎಲ್ಲ ನಿರ್ದೇಶಕರೂ ಸಹಿ ಮಾಡಿರಬೇಕಾಗುತ್ತದೆ.  ಇತ್ತೀಚಿಗೆ ಕಂಪ್ಯೂಟರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೇಲೆ ಬ್ಯಾಂಕುಗಳು ಈ ಖಾತೆಯ ಉತ್ತಮ ಗ್ರಾಹಕರನ್ನು ಹಲವಾರು ವಿಶಿಷ್ಟ ಸೇವಾ ಪ್ರಕ್ರಿಯೆಗಳನ್ನು ಯೋಜಿಸಿ ಆಕರ್ಷಿಸುತ್ತಿವೆ.		
					(ಕೆ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ